ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಯಕ್ಷಗಾನದ ಸಮೃದ್ಧಿಗಾಗಿ ಕೇಂದ್ರ ಸರಕಾರದ ನೆರವು ಅಗತ್ಯ

ಲೇಖಕರು : ಕಮಲಾಕ್ಷ ಸರಾಫ್‌
ಸೋಮವಾರ, ಡಿಸೆ೦ಬರ್ 7 , 2015

ಕರ್ನಾಟಕ ಜಾನಪದ ಕಲೆಗಳಲ್ಲಿ ಅತೀ ಹೆಮ್ಮೆಯ, ಆಕರ್ಷಣೀಯ, ಶಾಸ್ತ್ರೀಯ, ಪ್ರಾಚೀನ, ನಾವೀಣ್ಯವನ್ನು ಅಳವಡಿಸಿಕೊಂಡ ಕಲೆ ಎಂದರೆ ಅದು ಯಕ್ಷಗಾನ. ಕರ್ನಾಟಕದ ಗಂಡುಕಲೆ ಎಂದು ಪ್ರಚಲಿತಕ್ಕೆ ಬಂದ ಯಕ್ಷಗಾನ ಕಲೆ ಕೇವಲ ಕರ್ನಾಟಕಕ್ಕೆ ಸೀಮಿತವಾಗಿರದೆ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕುಣಿತ, ಸಂಭಾಷಣೆ, ಭಾಗವತಿಕೆಗಳಿಂದ ಸಮಾವೇಶ‌ಗೊಂಡು, ಚೆಂಡೆ- ಮದ್ದಳೆ,ತಾಳ, ಮೃದಂಗ ನಾದದಿಂದ ಶೃಂಗಾರ ಮುಕ್ತವಾಗಿ ಪ್ರೇಕ್ಷಕರ ಮನಸ್ಸನ್ನು ತಣಿಸಲು ಸಮರ್ಥವಾಗಿದೆ.

ಸರಳ, ಸುಂದರ ಕನ್ನಡ ಭಾಷೆಯನ್ನು ಮಾಧ್ಯಮವಾಗಿಟ್ಟುಕೊಂಡು ಆಗಾಗ್ಗೆ ಹಳೆಗನ್ನಡ, ಕಾವ್ಯಭಾಷೆ, ಬಳಸಿ ಯಕ್ಷಗಾನದ ಛಂದಸ್ಸಿನ ಮೆರುಗನ್ನು ಉತ್ತುಂಗಕ್ಕೆ ಕೊಂಡೊಯ್ಯುವ ಮಹಾನ್‌ ಶ್ರೇಯಸ್ಸನ್ನು ಈ ಕಲೆ ಹೊಂದಿದೆ. ಮನೋರಂಜನೆಯ ಜತೆಗೆ ರಾಮಾಯಣ, ಮಹಾಭಾರತ, ಪುರಾಣ, ಭಾಗವತಗಳ ಪೌರಾಣಿಕ ಕಥಾನಕಗಳನ್ನು ಅರಿಯುವ, ಅಭ್ಯ ಸಿಸುವ ನಿಟ್ಟಿನಲ್ಲಿ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವ ಅದ್ವಿತೀಯ ಶಕ್ತಿ ಯಕ್ಷಗಾನಕ್ಕೆ ಅಡಗಿದೆ.

ಯಕ್ಷಗಾನ ಅಂದರೆ ಯಕ್ಷರು,ಕಿನ್ನರರು ಆಡುವ ಭಾಷೆ. ಗಾಯನ ಅಥವಾ ಭಾಗವತಿ ಕೆಯ ಮುಖಾಂತರ ಕಥಾನಕ ವನ್ನು ವೀಕ್ಷಕರೆದುರು ಪ್ರಸ್ತುತಪಡಿ ಸುವುದು. ಗಾಯನವು ಹೆಚ್ಚಾಗಿ ಹಳೆಗನ್ನಡದಲ್ಲಿ ರಚಿಸಲ್ಪಟ್ಟ ಕಾರಣ ಅಭಿನಯ ಕಲಾವಿದರು ಈ ಗಾಯನದ ಅರ್ಥವನ್ನು ಸರಳ ಶೈಲಿಯ ಕನ್ನಡ ಭಾಷೆಯಲ್ಲಿ ನೃತ್ಯ ಸಿಂಚನದ ಮೂಲಕ ಅಭಿನಯಿಸಿ ಜನಸಾಮಾನ್ಯರಿಗೆ ತಿಳಿಹೇಳುವುದು ಪ್ರತೀತಿ. ಯಕ್ಷಗಾನದಲ್ಲಿ ಸಂಪ್ರ ದಾಯ, ಸಮೃದ್ಧಿ, ಗುಣವೃದ್ಧಿ, ರಂಗಕಲೆ ಸೇರಿದಂತೆ ಎಲ್ಲವೂ ಮುಖ್ಯ. ಯಕ್ಷಗಾನದಲ್ಲಿ ನವ ರಸಗಳು ಸಂಯುಕ್ತಗೊಂಡಿವೆ.

ಮುಖ್ಯವಾಗಿ ಕರ್ನಾಟಕದ ಉತ್ತರ ಕನ್ನಡದಲ್ಲಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬಹು ಪ್ರಚಲಿತಕ್ಕೆ ಬಂದ ಯಕ್ಷಕಲೆ ಬಯಲಾಟ ರೂಪದಲ್ಲಿ ಪ್ರದರ್ಶನಗೊಳ್ಳುತ್ತಿರುವುದು ಅಭಿನಂದ ನೀಯ. ಪ್ರಸ್ತುತ ದಿನಗಳಲ್ಲಿ ಯಕ್ಷ ಗಾನ ನಗರದ ಪ್ರದೇಶಗಳಿಗೂ ಪಾದರ್ಪಣೆಗೈದಿದೆ. ಅದರಲ್ಲೂ ಮುಂಬಯಿ ಮಹಾನಗರದಲ್ಲಿ ನಡೆಯುವಷ್ಟು ಯಕ್ಷಗಾನ ಪ್ರದರ್ಶನ ಬೇರಾವ ನಗರಗಳಲ್ಲೂ ನಡೆಯುತ್ತಿಲ್ಲ.

ಪ್ರಾರಂಭದ ದಿನಗಳಲ್ಲಿ ಶೇಣಿ, ವೀರಭದ್ರನಾಯಕ, ಸಾಮಗ, ಅಳಿಕೆ ರಾಮಯ್ಯ ರೈ, ಕೊಂಡದ ಕುಳಿ, ಕೆರೆಮನೆ ಶಿವರಾಮ ಹೆಗಡೆ, ಮಹಾಬಲ ಹೆಗಡೆ, ಶಂಭು ಹೆಗಡೆ, ಪುತ್ತೂರು ನಾರಾಯಣ ಹೆಗಡೆ, ಜಲವಳ್ಳಿ ವೆಂಕಟೇಶ್‌ ರಾವ್‌, ಬಳ್ಕೂರು ಕೃಷ್ಣ ಯಾಜಿ, ಕುಮಟ ಗೋವಿಂದ ನಾಯಕ್‌, ಮಂಟಪ ಉಪಾಧ್ಯಾಯ, ನಾರಾಯಣ ಭಟ್‌, ಹಾಲಾಡಿ, ಸಿದ್ಧಕಟ್ಟೆ ಇನ್ನಿತರ ಅಂಗ್ರಪಂಕ್ತಿಯ ಕಲಾಶ್ರೇಷ್ಠರು ಜೀವನವನ್ನು ಯಕ್ಷಗಾನ ಸಮೃದ್ಧಿಗೆ ಮುಡಿಪಾಗಿಟ್ಟುಕೊಂಡವರು. ನೃತ್ಯ, ಸಂಭಾಷಣೆ, ಅಭಿನಯಗಳಲ್ಲಿ ಪ್ರಾವೀಣ್ಯ ಹೊಂದಿದವರು.

ಇಡಗುಂಜಿ, ಧರ್ಮಸ್ಥಳ, ಅಮೃ ತೇಶ್ವರಿ, ಎಡನೀರು, ಸಾಲಿಗ್ರಾಮ, ಮಂಗಳೂರು, ಪೆರ್ಡೂರು, ಕಟೀಲು, ಹೊಸನಗರ ಮೇಳದ ಹೆಸರಾಂತ ಕಲಾವಿದರು ಕಿರೀಟ ಧರಿಸಿ, ಗೆಜ್ಜೆಕಟ್ಟಿ ಕುಣಿದು ಪ್ರಸಿದ್ಧರಾಗಿದ್ದಾರೆ. ಪ್ರಸ್ತುತ ಕೂಡ ಯಕ್ಷಗಾನ ಹಿಮ್ಮೇಳ-ಮುಮ್ಮೇಳ ಕಲಾವಿದರು ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಮೌಲ್ಯಾಧಾರಿತ ಯಕ್ಷಗಾನ ಕಲಾವಿದರ ಶ್ರೇಯೋ ಭಿವೃದ್ಧಿಯನ್ನು ಮನಗಂಡು ಕರ್ನಾಟಕದಲ್ಲಿ ರಾಜ್ಯ ಸರಕಾರದ ಲಾಂಛನದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಸ್ಥಾಪನೆಯಾಯಿತು. ಅಂದಿನಿಂದ ಇಂದಿನವರಗೆ ಅಕಾಡೆಮಿಯ ಹಲವು ಮೇಳಗಳ ಪ್ರದರ್ಶನಗಳನ್ನು ಕರ್ನಾಟಕದಲ್ಲಿ ಅಷ್ಟೇ ಅಲ್ಲ ಇತರ ರಾಜ್ಯಗಳಲ್ಲೂ ಪ್ರೋತ್ಸಾಹಿಸಿ, ಸುಂದರ ರಮಣೀಯ ಕಥಾನಕಗಳುಳ್ಳ ಪ್ರಸಂಗ ಗಳನ್ನು ಆಡಿ ತೋರಿಸಲು ಅನುವು ಮಾಡಿಕೊಟ್ಟರು.

ಕೆಲವೊಂದು ಬಾರಿ ನಿಜವಾದಸ್ಪರ್ಧೆಯನ್ನು ಸ್ಫೂರ್ತೀಕರಿ ಸಲು ಜೋಡಾಟ ಪ್ರಯೋಗಿಸಲಾಗುತ್ತಿತ್ತು. ಮೇರು ಕಲಾ ವಿದರನ್ನು ಹಿರಿಯ ಭಾಗವತರನ್ನು ಹಿಮ್ಮೇಳ - ಮುಮ್ಮೇ ಳದ ರಂಗಕರ್ಮಿಗಳನ್ನು ಹುರಿ ದುಂಬಿಸಿ ಅವರನ್ನು ಆಗಾಗ್ಗೆ ಪ್ರಶಸ್ತಿ ನೀಡಿ ಗೌರವಿಸುವ ಬಗೆ ಅಭಿನಂದನೀಯ.

ಯಕ್ಷಗಾನ ಪ್ರದರ್ಶನಗಳ ಚಟುವಟಿಕೆಗಳನ್ನು ಕೇವಲ ರಾಜ್ಯ ಮಟ್ಟದಲ್ಲಿ ಸೀಮಿತವಾಗಿರಿಸದೆ, ರಾಷ್ಟ್ರಮಟ್ಟದಲ್ಲಿ ಕೂಡ ಪ್ರಚಲಿತಕ್ಕೆ ತರುವ ಸದುದ್ದೇಶವನ್ನು ಕೇಂದ್ರ ಕಲಾ ಅಕಾಡೆಮಿಯು ಹೊಂದ ಬೇಕು. ಯಕ್ಷಗಾನ ಕಲೆ ಮತ್ತು ಕಲಾವಿದರು ರಾಷ್ಟ್ರೀಯ ಸೊತ್ತು. ಈ ನಿಟ್ಟಿನಲ್ಲಿ ಮುಂಬಯಿಯಲ್ಲೂ ಹಲವಾರು ಯಕ್ಷಗಾನ ಕಲಾ ವಿದರು, ಯಕ್ಷಗಾನ ಮೇಳಗಳು ಕಾರ್ಯನಿರ್ವಹಿಸುತ್ತಿವೆ. ಕಲಾಅಕಾಡೆಮಿಗಳು ಕೇವಲ ಕರ್ನಾ ಟಕದ ಕಲಾವಿದರನ್ನು ಗುರುತಿಸಿ ಗೌರವಿಸುವುದರೊಂದಿಗೆ ಇತರರಾಜ್ಯಗಳಲ್ಲಿ ನೆಲೆಸಿರುವ ಕಲಾ ವಿದರನ್ನು ಗೌರವಿಸಿದಾಗ ಯಕ್ಷಗಾನ ಅಜರಾಮರವಾಗಿ ಉಳಿಯ ಬಲ್ಲದು. ಯುವ ಕಲಾವಿದರಿಗೆ ಅದು ಪ್ರೇರಣೆಯಾಗಬಲ್ಲುದು.

ಯಕ್ಷಗಾನವನ್ನು ಮುಂಬ ಯಿಯಲ್ಲಿ ಮರಾಠಿ ಭಾಷೆಯಲ್ಲೂ ಆಡಿ ತೋರಿಸಲಾಗುತ್ತಿದೆ. ಆದ್ದ ರಿಂದ ಹಿಂದಿ, ಮರಾಠಿ, ಕೊಂಕಣಿ, ಬೆಂಗಾಲಿ, ಸಿಂಧಿ, ತುಳು ಇನ್ನಿತರ ಭಾಷೆಗಳಲ್ಲೂ ಯಕ್ಷಗಾನ ಸ್ಪಂದನೆಯ ಹಿನ್ನೆಲೆಯಲ್ಲಿ ಕೇಂದ್ರ ಕಲಾ ಅಕಾಡೆಮಿ ವಿಶೇಷವಾಗಿ ಸ್ಫೂರ್ತಿಗೊಂಡು ಯಕ್ಷರಂಗವನ್ನು ದೇಶದಾದ್ಯಂತ ಹರಡುವಲ್ಲಿ ಸಹಕರಿಸಬೇಕು. ಇಂಥ ಸನ್ನಿವೇಶದಲ್ಲಿ ಪರರಾಜ್ಯದ ಪ್ರೇಕ್ಷಕರು, ಭಾಷೆಯ ಹಂಗಿಲ್ಲದೆ ಯಕ್ಷಗಾನದಂತಹ ಮಹಾನ್‌ ಕಲೆಯ ಸವಿ ಅನುಭವಿಸಿ ಸಂತೃಪ್ತರಾಗುವುದು ಖಂಡಿತ. ಇದರಿಂದ ನಮ್ಮ ಸಂಸ್ಕೃತಿ, ಸಂಸ್ಕಾರಗಳು ಭವಿಷ್ಯದಲ್ಲಿ ಸ್ಥಿರವಾಗಿ ಉಳಿಯುತ್ತದೆ ಎಂಬುದರಲ್ಲಿ ಸಂಶಯವಿಲ್ಲ.




*********************
ಕೃಪೆ : udayavani


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ